ಬ್ಯಾಂಕೆಟ್
	ದಕ್ಷಿಣ ಆಫ್ರಿಕದ ಟ್ರಾನ್‍ಸ್ವಾಲಿನಲ್ಲಿರುವ ವಿಟ್‍ವಾಟ್‍ಸ್ರ್ರ್ಯಾಂಡ್ ಎಂಬ ಪ್ರದೇಶದಲ್ಲಿರುವ ಪುರಾತನ ಪೆಂಟೆಶಿಲೆಗಳಲ್ಲಿ ಹುದುಗಿರುವ ಸುವರ್ಣ ನಿಕ್ಷೇಪಗಳು. ರ್ಯಾಂಡ್ ಬ್ಯಾಂಕೆಟ್ ಎಂಬ ಸಂಕ್ಷಿಪ್ತ ಹೆಸರೂ ಉಂಟು. ಪ್ರಪಂಚದ ಒಟ್ಟು ಉತ್ಪಾದನೆಯ ಶೇಕಡಾ ಸುಮಾರು 73ರಷ್ಟು ಚಿನ್ನವನ್ನು (ಹಿಂದಿನ ರಷ್ಯಾ ಹೊರತುಪಡಿಸಿ) ಆಫ್ರಿಕ ಪ್ರತಿವರ್ಷ ಸರಬರಾಜು ಮಾಡುತ್ತದೆ. ಈ ಪ್ರಮಾಣದಲ್ಲಿ ಶೇಕಡಾ 80ರಷ್ಟು ಮುಖ್ಯವಾಗಿ ವಿಟ್‍ವಾಟ್ ಸ್ರ್ರ್ಯಾಂಡ್ ನಿಕ್ಷೇಪಗಳಿಂದ ಸರಬರಾಜಾಗುತ್ತದೆ. ಇತ್ತೀಚೆಗೆ ಆರೆಂಜ್ ಫ್ರೀ ಸ್ಟೇಟ್ಸ್‍ನಲ್ಲೂ ಚಿನ್ನದ ಗಣಿಗಳನ್ನು ಅಭಿವೃದ್ಧಿ ಪಡಿಸಲಾಯಿತು. ಇಂದು ಸುಮಾರು 320 ಕಿಮೀ ಗಳಷ್ಟು ಉದ್ದದ ಚಾಪದಲ್ಲಿ ಸುಮಾರು 60% ಭಾರಿ ಪ್ರಮಾಣದ ಚಿನ್ನದ ಗಣಿಗಳು ಆರಂಜ್ ಫ್ರೀಸ್ಟೇಟ್ಸ್ ಮತ್ತು ಟ್ರಾನ್‍ಸ್ವಾಲ್‍ಗಳಲ್ಲಿವೆ. ಚಿನ್ನದ ಗಣಿಗಳನ್ನೊಳಗೊಂಡಿರುವ ಈ ಒಂದು ಅಪೂರ್ವ ಪ್ರದೇಶಕ್ಕೆ ಸುವರ್ಣ ಚಾಪ ಎಂಬ ಹೆಸರುಂಟು. ಬ್ಯಾಂಕೆಟ್ ಈ ಚಾಪದಲ್ಲಿವೆ. ಸಾಮಾನ್ಯವಾಗಿ ಇಲ್ಲಿರುವ ಚಿನ್ನದ ಕಣಗಳು ಅತಿ ಸೂಕ್ಷ್ಮ. ಅವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ

	ರ್ಯಾಂಡ್ ನಿಕ್ಷೇಪಗಳ ಪತ್ತೆ: ರ್ಯಾಂಡ್ ಬ್ಯಾಂಕೆಟ್ ಸುವರ್ಣ ನಿಕ್ಷೇಪಗಳನ್ನು ಮೊದಲು 1884ರಲ್ಲಿ ಇಬ್ಬರು ಸಹೋದರರು ಪತ್ತೆ ಹಚ್ಚಿದರು. ಮರು ವರ್ಷವೇ ಇವರು ಅಲ್ಲಿ ಗಣಿಸ್ಥಾಪಿಸಿ ಚಿನ್ನ ಸಂಗ್ರಹಿಸುವ ಕೆಲಸಕೈಗೊಂಡರು. 1886ರ ಸುಮಾರಿಗೆ ಜೋಹಾನ್ಸ್ ಬರ್ಗ್ ಎಂಬ ಹೆಸರಿನ ಒಂದು ಸಣ್ಣ ಹಳ್ಳಿಯ ಸ್ಥಾಪನೆಯಾಗಿ ಇದೊಂದು ಪ್ರಮುಖ ಗಣಿಕಾರಿಕೆಯ ಕೇಂದ್ರವಾಗಿ ಬೆಳೆಯಿತು. 											(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ